ತೀಬ್ಸ್ 2

ಪುರಾತನ ಗ್ರೀಸಿನ್ ಬೀಯೋಷಿಯದ ಒಂದು ಮುಖ್ಯ ನಗರ. ಮಧ್ಯ ಗ್ರೀಸಿನಲ್ಲಿ ಅತೆನ್ಸ್ ನಗರದಿಂದ ವಾಯವ್ಯಕ್ಕೆ ಸುಮಾರು 44ಮೈ. ದೂರದಲ್ಲಿದೆ. ಜನಸಂಖ್ಯೆ 15,779(1961). ಪೂರ್ವ ಮಧ್ಯ ಗ್ರೀಸಿನ ರಸ್ತೆ ಹಾಗೂ ರೈಲುಮಾರ್ಗಗಳು ಈ ನಗರದ ಮೂಲಕ ಹಾದುಹೋಗುತ್ತವೆ. ಇದೊಂದು ಮುಖ್ಯ ವ್ಯಾಪಾರ ಕೇಂದ್ರ.			(ಎಚ್.ಎಂ.ಎನ್.ಆರ್.)

ತೀಬ್ಸ್ ಅತ್ಯಂತ ಪುರಾತನ ಇತಿಹಾಸ ಗ್ರೀಸ್‍ನಲ್ಲಿ ಪ್ರಚಲಿತವಾಗಿರುವ ಅನೇಕ ಸಾಂಪ್ರದಾಯಿಕ ಕಥೆಗಳಲ್ಲಿ ಅಡಗಿದೆ. ಅವುಗಳಲ್ಲಿ ಐತಿಹಾಸಿಕ ಮಹತ್ತ್ವವುಳ್ಳ ಭಾಗವೆಷ್ಟು. ಕಟ್ಟುಕಥೆ ಎಷ್ಟು ಎಂದು ನಿರ್ಧರಿಸುವುದು ಸುಲಭವಲ್ಲ. ಆದರೆ ಗ್ರೀಕ್ ಜನಾಂಗದವರೆಲ್ಲ ಅಲ್ಲಲ್ಲಿ ಒಂದುಗೂಡಿ ತಮ್ಮ ರಕ್ಷಣೆಗಾಗಿ ಕಟ್ಟಿಕೊಂಡ ಸುಭದ್ರವಾದ ಕೋಟೆಯುಳ್ಳ, ಗ್ರೀಸ್ ದೇಶದಲ್ಲಿ ಪ್ರಬಲವಾದ ಸೇನೆಗಳನ್ನು ಪಡೆದಿದ್ದ ನಗರಗಳಲ್ಲಿ ಇದೂ ಒಂದೆಂಬುದು ಸತ್ಯವಾದ ಅಂಶ. ಈ ನಗರದ ಅತಿ ಪ್ರಾಚೀನ ಇತಿಹಾಸ ಹೆಚ್ಚಾಗಿ ತಿಳಿದಿಲ್ಲವಾದರೂ ಭೂಸ್ವಾಮ್ಯ ಹೊಂದಿದ ಶ್ರೀಮಂತ ಪ್ರಭುತ್ವದವರು ಈ ನಗರದ ಆಳ್ವಿಕೆಯ ಅಧಿಕಾರ ಪಡೆದಿದ್ದರೆಂದೂ ಅವರ ಕಾಲದಲ್ಲಿ ಭೂಸ್ವಾಮ್ಯಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕಾನೂನುಗಳಿದ್ದುವೆಂದೂ ತಿಳಿದುಬಂದಿದೆ.

ಕ್ರಿ. ಪೂ. 6ನೆಯ ಶತಮಾನದ ಅಂತ್ಯಭಾಗಕ್ಕೆ ಆತೆನ್ಸ್ ನಗರದವರು ಬೀಯೋಷಿಯದ ಪ್ಲಟೀಯ ನಗರದ ಸ್ವಾತಂತ್ರ್ಯದ ರಕ್ಷಣೆಯಲ್ಲಿ ತೀಬನರನ್ನು ಎದುರಿಸಿದ ಫಲವಾಗಿ ತೀಬನರಿಗೂ ಆತೆನ್ಸೊನವರಿಗೂ ವೈಷಮ್ಯ ಏರ್ಪಟ್ಟಿತು. ಪರ್ಷಿಯನರ ಮುತ್ತಿಗೆಯ ಸಮಯದಲ್ಲಿ ತೀಬ್ಸ್ ನಗರದಿಂದ 700 ಸೈನಿಕರ ಒಂದು ಚಿಕ್ಕ ತುಕಡಿ ಆತೆನ್ಸಿನ ಸಹಾಯಕ್ಕಾಗಿ ತರ್ಮಾಪಿಲೀಗೆ ಹೋಗಿ ಅಲ್ಲಿ ಅಂತ್ಯದವರೆಗೂ ಲಿಯೋನಿಡಾಸನ ನೇತೃತ್ವದಲ್ಲಿ ಯುದ್ಧದಲ್ಲಿ ಪಾತ್ರವಹಿಸಿತಾದರೂ ಕ್ರಿ . ಪೂ 439ರಲ್ಲಿ ನಡೆದ ಪ್ಲಟೀಯ ಕದನದಲ್ಲಿ ತೀಬ್ಸ್ ಅಧಿಕೃತವಾಗಿ ವಿರೋಧ ಪಕ್ಷವನ್ನು ಕೂಡಿಕೊಂಡು ಉತ್ಸಾಹಪೂರ್ಣವಾಗಿ ಯುದ್ಧದಲ್ಲಿ ಪಾಲ್ಗೊಂಡಿತು. ಆದರೆ ಪರಿಣಾಮ ಮಾತ್ರ ಹಿತವಾಗಲಿಲ್ಲ. ಗ್ರೀಕರ ವಿಜಯದ ಬಳಿಕ ಬೀಯೋಷಿಯನ್ ಲೀಗಿನ ಅಧ್ಯಕ್ಷ ಪದವಿಯನ್ನು ಕಳೆದುಕೊಳ್ಳಬೇಕಾಯಿತು. ಇದಕ್ಕೆ ಹೆಚ್ಚಿನ ಶಿಕ್ಷೆ ವಿಧಿಸಿ. ತೀಬ್ಸನ್ನು ಡೆಲ್ಫಿಯ ಅಪಾಲೋ ಮಂದಿರ ರಕ್ಷಣೆಯ ಕೂಟದಿಂದಲೇ ಹೊರದೂಡಬೇಕೆಂದು ಸ್ಪಾರ್ಟ ಅಪೇಕ್ಷಿಸಿತಾದರೂ ಆತೆನ್ಸ್ ಇದಕ್ಕೆ ಎಡೆ ಕೊಡಲಿಲ್ಲ. ಬೀಯೋಷಿಯನ್ ನಗರಗಳನ್ನು, ಅದರಲ್ಲೂ ಪ್ಲಟೀಯ ನಗರವನ್ನು, ಆಕ್ರಮಿಸಬೇಕೆಂದು ಕ್ರಿ. ಪೂ. 431ರಲ್ಲಿ ತೀಬ್ಸ್ ನಡೆಸಿದ ಯತ್ನವೂ ಯಶಸ್ವಿಯಾಗಲಿಲ್ಲ. ಆತೆನ್ಸಿನವರು ಆ ಪುಟ್ಟ ನಗರವನ್ನು ತೀಬ್ಸಿನ ಆಕ್ರಮಣದಿಂದ ಮುಕ್ತಿಗೊಳಿಸಿದರೆಂಬ ಕಾರಣದಿಂದಾಗಿ ತದನಂತರ ನಡೆದ ಸ್ಪಾರ್ಟ ಮತ್ತು ಆತೆನ್ಸ್ ನಗರಗಳ ನಡುವಿನ ಪೆಲೊಪೊನೀಷಿಯನ್ ಸಮರದಲ್ಲಿ ತೀಬ್ಸ್ ನಗೆ ಆತೆನ್ಸ ವಿರುದ್ಧ ಸ್ಪಾರ್ಟಕ್ಕೆ ಸಹಾಯನೀಡಿತು. ಇದಕ್ಕೆ ಪ್ರತಿಯಾಗಿ ಅದು ಪ್ಲಟೀಯ ನಗರವನ್ನಾಕ್ರಮಿಸಿ ನಾಶಗೊಳಿಸುವಲ್ಲಿ ಅದಕ್ಕೆ ಸ್ಪಾರ್ಟದ ಬೆಂಬಲ ದೊರಕಿತಾದರೂ ಪೆಲೊಪೊನೀಷಿಯನ್ ಸಮರದ ಬಳಿಕ ವಿಜಯಿಯಾದ ಸ್ಪಾರ್ಟ, ತೀಬ್ಸ್ ಆಕ್ರಮಿಸಲಾಶಿಸಿದ್ದ ನಗರಗಳಿಗೆ ರಕ್ಷಣೆ ನೀಡಿತಾಗಿ ಸ್ಪಾರ್ಟದೊಡನೆ ತೀಬ್ಸ್ ತನ್ನ ಸಂಬಂಧ ಕಡಿದುಕೊಂಡಿತು. ಕ್ರಿ. ಪೂ. 404ರಲ್ಲಿ ಆತೆನ್ಸಿನ ನಾಶಕ್ಕಾಗಿ ತೀಬ್ಸ್ ಯೋಜಿಸಿತಾದರೂ ಪ್ರಬಲಗೊಳ್ಳುತ್ತಿದ್ದ ಸ್ಪಾರ್ಟಕ್ಕೆ ವಿರುದ್ಧವಾಗಿ ಆತೆನ್ಸ್ ಪ್ರಜಾಪ್ರಭುತ್ವದ ಪುನರ್‍ಸ್ಥಾಪನೆಗಾಗಿ ಗೋಪ್ಯವಾಗಿ ಪ್ರಯತ್ನಪಟ್ಟಿತು. ಕೆಲವು ವರ್ಷಗಳ ಬಳಿಕ ಪರ್ಷಿಯನ್ನರ ಉತ್ತೇಜನ ಪಡೆದು ಕಾರಿಂತಿಯನ್ ಸಮರಕ್ಕೆ ಎಡೆಮಾಡಿಕೊಟ್ಟಿತು. ಇದರಲ್ಲಿ ಸ್ಪಾರ್ಟಕ ಪ್ರಬಲ ಶತ್ರುವಾಗಿ ತನ್ನ ಸೈನ್ಯಬಲ ಎಷ್ಟು ಹೆಚ್ಚಿನದೆಂಬುದನ್ನು ತೋರಿಸಿಕೊಂಡಿತು. ಇಪಾಮಿನಾಂಡಸ್ (ಕ್ರಿ. ಪೂ. 418?-362) ಮತ್ತು ಪಿಲಾಪಿಡಾಸರ ನೇತೃತ್ವದಲ್ಲಿ ಮುನ್ನುಗಿದ ತೀಬನ್ ಸೈನ್ಯ ಗ್ರೀಸ್‍ನಲ್ಲೇ ಅತ್ಯುತ್ತಮವೂ ಅತ್ಯಂತ ಪ್ರಬಲವೂ ಆಗಿದ್ದ ಸ್ಪಾರ್ಟದ ಶಕ್ತಿಯನ್ನು ಸಂಪೂರ್ಣವಾಗಿ ನಾಶಮಾಡಿ (ಕ್ರಿ. ಪೂ. 371) ತೆಸಲೀ ಮತ್ತು ಮ್ಯಾಸಿಡೋನಿಯಗಳಿಗೂ ನುಗ್ಗಿತು. ಹೀಗೆ ಕೊನೆಗೂ ಗ್ರೀಸಿನ ಪ್ರಬಲಶಕ್ತಿಯೆನಿಸಿಕೊಂಡ ತೀಬ್ಸ್ ತನ್ನ ಸ್ಥಾನವನ್ನು ಬಹಳ ದಿನ ಉಳಿಸಿಕೊಳ್ಳಲಾಗಲಿಲ್ಲ. ಕ್ರಿ. ಪೂ. 395ರಿಂದಲೂ ಸ್ಪಾರ್ಟಕ್ಕೆ ಹೆದರಿ ತೀಬ್ಸ್ ನೋಡಗೂಡಿದ ಆತೆನ್ಸ ನಗರ ಕ್ರಿ. ಪೂ. 371 ರಿಂದ ತೀಬ್ಸ್ ಒಂದು ಸಾಮ್ರಾಜ್ಯವಾಗದಂತೆ ನೋಡಿಕೊಳ್ಳತೊಡಗಿತು. ಕ್ರಿ. ಪೂ 362ರಲ್ಲಿ ಇಪಾಮಿನಾಂಡಸನ ಮರಣಾನಂತರ ತೀಬ್ಸ್‍ನ ಪ್ರಾಬಲ್ಯ ಬಹಳಮಟ್ಟಿಗೆ ಕುಗ್ಗಿತು. ನೆರಯ ರಾಜ್ಯವಾದ ಫೋಸಿನೊಡನೆ ಕ್ರಿ. ಪೂ. 356-46ರಲ್ಲಿ ನಡೆದ ಕದನದಲ್ಲಿ ತನ್ನ ಸ್ಥಾನಮಾನಗಳನ್ನು ಕಾಯ್ದುಕೊಳ್ಳಲು ಮ್ಯಾಸಿಡಾನಿನ ಎರಡನೆಯ ಫಿಲೆಪ್‍ನ ಮೊರೆಹೊಕ್ಕು, ಮೃತ್ಯವಿಗೇ ಆಹ್ವಾನ ನೀಡಿದಂತೆ ಮಾಡಿಕೊಂಡಿತು. 338ರಲ್ಲಿ ಡಿಮಾಸ್ತನೀಸನ ಒತ್ತಾಯ ಮತ್ತು ಪ್ರಯತ್ನಗಳಿಂದಾಗಿ ಫಿಲಿಪ್ ಆಟಿಕದ ಮೇಲೆ ದಾಳಿಯಿಡದಂತೆ ಮಾಡಲು ಆತೆನ್ಸ್ ಸಹಾಯ ಪಡೆದು ಕೊನೆಯ ಬಾರಿಗೆ ಒಮ್ಮೆ ತನ್ನ ಸೇನಾಬಲವನ್ನು ತೋರ್ಪಡಿಸಿಕೊಂಡಿತಾದರೂ ಫಿಲಿಪ್‍ನ ಮಗನಾದ ಅಲೆಗ್ಸಾಂಡರನಿಂದ ಸೋಲನ್ನನುಭವಿಸಿತು. ತೀಬ್ಸ್ ಅವನ ವಿರುದ್ಧವಾಗಿ ದಂಗೆಯೆದ್ದಿತೆಂದು ಅವನು ಆ ನಗರವನ್ನು ನಿರ್ನಾಮಮಾಡಿದ (ಕ್ರಿ. ಪೂ 336). ನಗರದಲ್ಲಿದ್ದ ಗ್ರೀಕ್ ಕವಿ ಪಿಂಡಾರನ ಮನೆಯನ್ನು ಮಾತ್ರ ಉಳಿಸಲಾಯಿತೆಂದು ಪ್ರತೀತಿ. ಅಂತೂ ತೀಬ್ಸ್ ಮತ್ತೆ ತಲೆಯೆತ್ತಲಿಲ್ಲ.					(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ